ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ (ಭಾರತದಲ್ಲಿ) : ಭಾರತದಲ್ಲಿ ಕಬ್ಬಿಣದ ಕೈಗಾರಿಕೆ ಮೂರು ಸಾವಿರ ವರ್ಷಗಳಿಗೂ ಹಿಂದಿನದು. ಇಲ್ಲಿ ತಯಾರಾದ ಉಕ್ಕು ಅನೇಕ ದೇಶಗಳಿಗೆ ರಫ್ತಾಗುತ್ತಿತ್ತು. ಸು. 19ನೆಯ ಶತಮಾನದಲ್ಲಿ ದೇಶದಲ್ಲಿದ್ದ ಕುಲುಮೆಗಳೆಲ್ಲವೂ ತಣ್ಣಗಾಗಿ ಹೋದವು. ಅಲ್ಪಸ್ವಲ್ಪ ಉತ್ಪಾದನೆ ಮಾತ್ರ ಆಗುತ್ತಿತ್ತು. ಬ್ರಿಟಿಷರು ದೇಶವನ್ನು ಆಕ್ರಮಿಸಿಕೊಂಡ ಮೇಲೆ ಶಾಂತಿ ನೆಲೆಸಿತು: ಹೊರಗಡೆಯಿಂದ ಸುಲಭದರದಲ್ಲಿ ಹೇರಳವಾಗಿ ಕಬ್ಬಿಣ ಈ ದೇಶಕ್ಕೆ ಬರತೊಡಗಿದಂತೆ ನಾಡ ಕೈಗಾರಿಕೆ ಪೈಪೋಟಿಯನ್ನು ಎದುರಿಸಲಾಗದೆ ಮೂಲೆ ಪಾಲಾಯಿತು.

ಈಚೆಗೆ ಮತ್ತೆ ಕಬ್ಬಿಣದ ಕೈಗಾರಿಕೆ ದೇಶದಲ್ಲಿ ತಲೆಯೆತ್ತಲು ಕಾರಣರಾದವರು ಸುಪ್ರಸಿದ್ಧರಾದ ಜೆಮ್ಶೇಟ್ಜಿ ನಸರವಾನ್ಜಿ ತಾತಾ. ಅವರು 1899ರಲ್ಲಿ ಉಕ್ಕಿನ ತಯಾರಿಕೆಗೆ ಒಂದು ಬೃಹತ್ ಯೋಜನೆಯನ್ನು ಸಿದ್ಧಪಡಿಸಿದರು. 1906ರಲ್ಲಿ ಬಿಹಾರದ ಸಾಕ್ಚಿಯ (ಈಗಿನ ಜಮ್ಷಡ್ಪುರ) ಬಳಿ ತಾತಾ ಐರನ್ ಅಂಡ್ ಸ್ಟೀಲ್ ಕಂಪನಿ (ಖಿISಅಔ) ಎಂಬ ನಾಮದಿಂದ ಕೈಗಾರಿಕೆ ಮೊದಲು ಸ್ಥಾಪಿತವಾಯಿತು. ಮೊದಲ 30 ವರ್ಷಗಳ ಕಾಲದಲ್ಲಿ ಬೆಳೆಯುತ್ತ ಮುಂದೆ ಇನ್ನಷ್ಟು ವಿಸ್ತೃತವಾಗಿ 1939ರ ಹೊತ್ತಿಗೆ ಬ್ರಿಟಿಷ್ ರಾಜ್ಯದಲ್ಲೇ ಅತಿದೊಡ್ಡದಾದ ಯಂತ್ರಾಗಾರವೆನ್ನುವ ಪ್ರಶಸ್ತಿಯನ್ನು ಇದು ಗಳಿಸಿತು. 1918ರ ಕೊಲ್ಕೊತ್ತ ನಗರದಲ್ಲಿನ ಕೆಲವು ಮುಖ್ಯ ವ್ಯಾಪಾರಿಗಳು ಸೇರಿ ಇಂಡಿಯನ್ ಐರನ್ ಅಂಡ್ ಸ್ಟೀಲ್ ಕಂಪನಿ (IISಅಔ) ಎಂಬ ಹೆಸರಿನಲ್ಲಿ ಬಂಗಾಳದಲ್ಲಿರುವ ಬರ್ನ್ಪುರದ ಹತ್ತಿರ ಇನ್ನೊಂದು ಕೈಗಾರಿಕೆಯನ್ನು ಸ್ಥಾಪಿಸಿದರು. ಇಲ್ಲಿ ಮೊದಲು ಬೀಡು ಕಬ್ಬಿಣ ತಯಾರಾಗುತ್ತಿದ್ದು 1939ರಲ್ಲಿ ಉಕ್ಕಿನ ಉತ್ಪಾದನೆ ಮೊದಲಾಯಿತು.

ಇದೇ ಸುಮಾರಿಗೆ ಆಧುನಿಕ ಮೈಸೂರಿನ ನಿರ್ಮಾಪಕರಾದ ಸರ್.ಎಂ. ವಿಶ್ವೇಶ್ವರಯ್ಯನವರು ದಿಟ್ಟತನದಿಂದ ಮೈಸೂರಿನಲ್ಲಿಯೂ ಒಂದು ಕಬ್ಬಿಣದ ಕುಲುಮೆಯನ್ನು ಸ್ಥಾಪಿಸಿದರು. ಕಲ್ಲಿದ್ದಲು ದೊರೆಯದೆ ಹೋದ ಕಾರಣ ಮರಸುಟ್ಟ ಇದ್ದಲನ್ನು ಅವಲಂಬಿಸಿಯೇ ಇಲ್ಲಿ ಬೀಡುಕಬ್ಬಿಣವನ್ನು ತಯಾರಿಸಲಾಗುತ್ತಿತ್ತು. 1925ರಲ್ಲಿ ಉಕ್ಕಿನ ತಯಾರಿಕೆ ಮೊದಲಾಯಿತು. ಎರಡನೆಯ ಮಹಾಯುದ್ಧದಿಂದೀಚೆಗೆ ವಿದ್ಯುಚ್ಛಕ್ತಿಯ ಉಪಯೋಗದಿಂದ ಬೀಡುಕಬ್ಬಿಣ ತಯಾರಾಗುತ್ತಿದೆ.  ಅನೇಕ ಬಗೆಯ ಮಿಶ್ರಲೋಹಗಳ ತಯಾರಿಕೆಗೂ ಭದ್ರಾವತಿ ಪ್ರಸಿದ್ಧಿಯಾಗಿದೆ.
1954 ರಿಂದೀಚೆಗೆ ದೇಶದಲ್ಲಿ ಉಕ್ಕಿನ ಬಳಕೆ ಹೆಚ್ಚುತ್ತ ಹೋಗಿ ಹೇರಳವಾಗಿ ಉಕ್ಕನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಒದಗಿತು. ಇದನ್ನು ಸರಿಪಡಿಸಲು ಮತ್ತು ಕೈಗಾರಿಕೆ ಯಾವ ರೀತಿ ಮುಂದುವರಿಯಬೇಕೆನ್ನುವ ರೂಪುರೇಖೆಯನ್ನು ಗುರುತಿಸಲು ತಜ್ಞರ ಮಂಡಳಿಯೊಂದನ್ನು ಭಾರತ ಸರ್ಕಾರ ನೇಮಿಸಿತು. 1946ರಲ್ಲಿ ಈ ಸಮಿತಿ ವರ್ಷಂಪ್ರತಿ 5 ಲಕ್ಷ ಟನ್ ಉತ್ಪಾದಿಸುವ ಎರಡು ಹೊಸ ಸ್ಥಾವರಗಳನ್ನು ಕಟ್ಟಬೇಕೆಂದು ಸಲಹೆ ಮಾಡಿತು. ಅದರ ಸಲಹೆ ಕಾರ್ಯಗತವಾಗಲು ಬಹಳ ಕಾಲ ಹಿಡಿಯಿತು. 1953ರಲ್ಲಿ ಜರ್ಮನ್ ಕಂಪನಿಯೊಂದು ಒರಿಸ್ಸದ ರೂರ್ಕೆಲಾ ಬಳಿ ಒಂದು ಕಾರ್ಖಾನೆಯನ್ನು ಕಟ್ಟಲು ಒಪ್ಪಿತು. 1955ರಲ್ಲಿ ಸೋವಿಯತ್ ಸರ್ಕಾರ ಮಧ್ಯ ಪ್ರದೇಶದ ಭಿಲೈ ಬಳಿ ದೊಡ್ಡ ಉಕ್ಕು ಉತ್ಪಾದಿಸುವ ಯಂತ್ರವನ್ನು ಕಟ್ಟಲು ಮುಂದೆ ಬಂತು. ಅದೇ ವರ್ಷ ಬ್ರಿಟಿಷ್ ಕಂಪನಿಗಳು ಕೆಲವು ಸೇರಿ ಪಶ್ಚಿಮ ಬಂಗಾಳದ ದುರ್ಗಾಪುರದ ಬಳಿ ಇನ್ನೊಂದು ಉಕ್ಕಿನ ಯಂತ್ರವನ್ನು ಸ್ಥಾಪಿಸಲು ಒಪ್ಪಂದ ಮಾಡಿಕೊಂಡವು. ಈ ಮೂರು ಯಂತ್ರಸ್ಥಾವರಗಳಿಗೆ ಬೇಕಾದ ವಿದೇಶೀ ವಿನಿಮಯ ಹಣವನ್ನು ಕೊಡಲು ಜರ್ಮನ್ ಸೋವಿಯತ್ ಮತ್ತು ಬ್ರಿಟಿಷ್ ಸರ್ಕಾರಗಳು ಒಪ್ಪಿದವು. ಈ ರೀತಿಯಾಗಿ ಮೂರು ಮುಖ್ಯ ಯಂತ್ರಸ್ಥಾವರಗಳು ಎರಡನೆಯ ಯೋಜನೆಯ ಅವಧಿಯಲ್ಲಿ (1956-61) ದೇಶದ ನಾನಾ ಭಾಗಗಳಲ್ಲಿ ಅಸ್ತಿತ್ವಕ್ಕೆ ಬಂದುವು. ಈ ಮೂರೂ ಸರ್ಕಾರಿ ಸಂಸ್ಥೆಗಳಾಗಿ ರೂಪುಗೊಂಡವು. ಮೂರನೆಯ ಯೋಜನೆಯ ಅವಧಿಯಲ್ಲಿ ಇವೆಲ್ಲ ಸ್ಥಾವರಗಳಲ್ಲಿಯೂ ಉತ್ಪಾದನೆ ಹೆಚ್ಚಿದುದಲ್ಲದೆ ಬೊಕಾರೊ ಬಳಿ ಹೊಸದೊಂದು ಕಬ್ಬಿಣ ಕುಲುಮೆಯನ್ನು ಕಟ್ಟುವ ಕೆಲಸ ಮಾಡಲಾಯಿತು. ಎಲ್ಲ ಸ್ಥಾವರಗಳು ಉತ್ತರ ಭಾರತದಲ್ಲಿಯೇ ಕೇಂದ್ರೀಕೃತವಾದ ಕಾರಣ ದಕ್ಷಿಣದಲ್ಲಿ ಒಂದು ಬೃಹತ್ ಪ್ರಮಾಣದ ಕಬ್ಬಿಣ ಕೈಗಾರಿಕೆಯನ್ನು ನಾಲ್ಕನೆ ಯೋಜನೆ ಅವಧಿಯಲ್ಲಿ ನಿರ್ಮಿಸಬೇಕೆಂದು ಸೂಚಿಸಲಾಯಿತು. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲೂ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿಯೂ ತಮಿಳುನಾಡಿನ ಸೇಲಂನಲ್ಲಿಯೂ ತಲಾ ಒಂದೊಂದು ಕಾರ್ಖಾನೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿತು.

ದೇಶ ಪ್ರಗತಿ ಪಥದಲ್ಲಿ ಮುಂದುವರಿಯುವುದಕ್ಕೆ ದಕ್ಷ ಆಡಳಿತ ಹೇಗೆ ಮುಖ್ಯವೋ ಆ ದೇಶದಲ್ಲಿನ ಖನಿಜ ಸಂಪತ್ತೂ ಅಷ್ಟೇ ಮುಖ್ಯ, ಪ್ರಕೃತಿದತ್ತವಾದ ಈ ಸಂಪತ್ತನ್ನು ಯಾವರೀತಿ ಉಪಯೋಗಿಸಿಕೊಂಡು ದೇಶದ ಆಡಳಿತವನ್ನು ಸುಭದ್ರವಾದ ತಳಹದಿಯ ಮೇಲೆ ಕಟ್ಟಿ ಪ್ರಗತಿಪಥದಲ್ಲಿ ಮುಂದೆ ತೆಗೆದುಕೊಂಡು ಹೋಗಬೇಕೆನ್ನುವುದಕ್ಕೆ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯ ಬೆಳೆವಣಿಗೆಗಿಂತ ಬೇರೆ ಉತ್ತಮ ನಿದರ್ಶನ ಸಿಕ್ಕಲಾರದು. ಜಪಾನ್ ದೇಶ ತನ್ನಲ್ಲಿ ಕಬ್ಬಿಣದ ಅದಿರು ಲವಲೇಶ ಇಲ್ಲದಿದ್ದರೂ ಪ್ರಪಂಚದಲ್ಲೇ ಹಿರಿದಾದ ಕಬ್ಬಿಣ ಕೈಗಾರಿಕೆಯನ್ನು ಸ್ಥಾಪಿಸಿ, ನಾಗರಿಕ ಜನಾಂಗಗಳಲ್ಲಿ ಬಹು ಮುಂದುವರಿದ ರಾಷ್ಟ್ರವೆಂದು ಹೆಸರುಗಳಿಸಿದೆ. ಪ್ರಪಂಚದ ಯಾವ ರಾಷ್ಟ್ರಕ್ಕೂ ಕಡಿಮೆ ಇಲ್ಲದಂತೆ ಖನಿಜಸಂಪತ್ತನ್ನು ಪಡೆದಿರುವ ಭಾರತ ದೇಶವೂ ಕಬ್ಬಿಣ ಕೈಗಾರಿಕೆಯಲ್ಲಿ ಹಿರಿಮೆಯ ಸ್ಥಾನವನ್ನು ಗಳಿಸಿ ಮುಂದುವರಿಯುವಂತಾಗಬೇಕು.              (ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ